ಸಾಹಿತ್ಯ
ಗಿರಿಜಾಕಲ್ಯಾಣ ಮಹಾಪ್ರಬಂಧಂ
  1. ಕಾವ್ಯದ ಹೆಸರು: ಗಿರಿಜಾಕಲ್ಯಾಣ ಮಹಾಪ್ರಬಂಧಂ
  2. ಕವಿಯ ಹೆಸರು: ಹರಿಹರ
  3. ಕಾಲ: ಹದಿಮೂರನೆಯ ಶತಮಾನ
  4. ಸ್ಥಳ/ಸ್ಥಳಗಳು: ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಸಮೀಪದಲ್ಲಿರುವ ಹಂಪಿ, ಹಾಸನ ಜಿಲ್ಲೆಯ ಹಳೇಬೀಡು.
  5. ಮತ-ಧರ್ಮ: ಶೈವ
  6. ಆಶ್ರಯದಾತರು: ಹೊಯ್ಸಳ ರಾಜವಂಶದ ನರಸಿಂಹ ಬಲ್ಲಾಳ. (ಸ್ವಲ್ಪ ಕಾಲ ಮಾತ್ರ)
  7. ಬಿರುದುಗಳು: ರಗಳೆಯ ಕವಿ
  8. ಸಾಹಿತ್ಯಪ್ರಕಾರ: ಚಂಪೂ ಕಾವ್ಯ
  9. ಛಂದೋರೂಪ: ವೃತ್ತಗಳು, ಕಂದ ಪದ್ಯ ಮತ್ತು ಗದ್ಯ
  10. ಹಸ್ತಪ್ರತಿಗಳು: ಓಲೆಗರಿ ಪ್ರತಿ ಮತ್ತು ಕಾಗದ
  11. ಪ್ರಕಟವಾದ ವರ್ಷ: ಕ್ರಿ.ಶ. 1886
  12. ಸಂಪಾದಕರು: ಹೆಸರಘಟ್ಟ ಹೊನ್ನಪ್ಪ
  13. ಪ್ರಕಾಶಕರು: ??
  14.  

  15. ನಂತರದ ಆವೃತ್ತಿಗಳು:

ಅ. 1905, ಎಸ್.ಜಿ. ನರಸಿಂಹಾಚಾರ್ ಮತ್ತು ಎಂ.ಎ. ರಾಮಾನುಜ ಅಯ್ಯಂಗಾರ್, ಕಾವ್ಯಕಲಾನಿಧಿಮಾಲೆ, ಮೈಸೂರು.

ಆ. 1943, ಶಿ.ಚ. ನಂದೀಮಠ, ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ, ಧಾರವಾಡ.

ಇ. 1977, ಎಂ.ಎಸ್. ಸುಂಕಾಪುರ, ಧಾರವಾಡ

ಈ. 1951, ಎಚ್. ದೇವೀರಪ್ಪ ಮತ್ತು ದೇ. ಜವರೇಗೌಡ, ಸಂಗ್ರಹ ಆವೃತ್ತಿ, ಮೈಸೂರು

ಉ. 1976, ಎಂ.ಜಿ. ನಂಜುಂಡಾರಾಧ್ಯ, (ಗದ್ಯಾನುವಾದದೊಂದಿಗೆ) ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

 

  1. ಕಿರು ಪರಿಚಯ: ತನ್ನ ಶಿವಗಣದ ರಗಳೆಗಳಿಗಾಗಿ ಹೆಚ್ಚು ಪ್ರಸಿದ್ಧನಾಗಿರುವ ಹರಿಹರನು, ಕೆಲವು ಶತಕಗಳು ಮತ್ತು ಒಂದು ಚಂಪೂ ಕಾವ್ಯವನ್ನೂ ಬರೆದಿದ್ದಾನೆ. ಶಿವನನ್ನು ಮದುವೆಯಾಗುವ ಉದ್ದೇಶದಿಂದ ಬಹಳ ಕಠೋರವಾದ ತಪಸ್ಸನ್ನು ಕೈಕೊಂಡ ಪಾರ್ವತಿಯು ಎದುರಿಸುವ ಪರೀಕ್ಷೆಗಳು ಹಾಗೂ ಅವಳು ಪಡೆಯುವ ಯಶಸ್ಸು ಈ ಕಾವ್ಯದ ಕೇಂದ್ರವಸ್ತು. ಗಿಜಾಕಲ್ಯಾಣವು ಶಿವಪುರಾಣ, ಲಿಂಗಪುರಾಣ ಮತ್ತು ಕಾಳಿದಾಸನ ಕುಮಾರಸಂಭವಗಳನ್ನು ಅವಲಂಬಿಸಿದೆ. ಆದರೆ, ಇಲ್ಲಿ ಕುಮಾರಸ್ವಾಮಿಯ ಜನನ ಮತ್ತು ಸಾಹಸಗಳನ್ನು ನಿರೂಪಿಸಿಲ್ಲ. ಈ ಕಾವ್ಯವು, ದಾಕ್ಷಾಯಣಿಯ ದಹನ, ಶಿವನ ವಿರಹವ್ಯಥೆ ಹಾಗೂ ಉಗ್ರ ತಪಸ್ಸು, ಕಾಮದಹನ, ಗಿರಿಜೆಯ ತಪಸ್ಸು ಮತ್ತು ಶಿವ ಪಾರ್ವತಿಯರ ಮಿಲನದ ಮೇಲೆ ಒತ್ತುಕೊಟ್ಟಿದೆ. ಕಾವ್ಯವು ಶಿವ-ಪಾರ್ವತಿಯರ ವಿವಾಹದೊಂದಿಗೆ ಮುಕ್ತಾಯವಾಗುತ್ತದೆ.
    ಗಿರಿಜಾಕಲ್ಯಾಣವು, ಪಂಪಾಕ್ಷೇತ್ರದ ವರ್ಣನೆ, ಕಾಮದಹನದ ಪ್ರಸಂಗ, ಶಿವನು ಮಾರುವೇಷದಲ್ಲಿ ಪಾರ್ವತಿಯನ್ನು ಭೇಟಿಯಾಗುವ ಪ್ರಸಂಗ ಮುಂತಾದ ಸನ್ನಿವೇಶಗಳ ಕಾವ್ಯಸೌಂದರ್ಯಕ್ಕಾಗಿ ಪ್ರಸಿದ್ಧವಾಗಿದೆ. ಇಲ್ಲಿ ಹರಿಹರನು ನಡುಗನ್ನಡದ ಬದಲಾಗಿ ಹಳಗನ್ನಡದ ಕಡೆಗೆ ಒಲವು ತೋರಿಸಿದ್ದಾನೆ. ಈ ಪ್ರವೃತ್ತಿಯು ರಗಳೆಗಳಲ್ಲಿ ಬದಲಾಯಿತು. ಅದಲ್ಲದೆ, ಸಂಸ್ಕೃತದಿಂದ ತೆಗೆದುಕೊಂಡ ಅನೇಕ ಛಂದೋರೂಪಗಳನ್ನು ಬಳಸುವುದು ಅನಿವಾರ್ಯವಾದ ಚಂಪೂರೂಪವನ್ನು ಅವನು ಬಳಸಿರುವುದು ಕುತೂಹಲಕರ. ಒಟ್ಟಿನಲ್ಲಿ ಹರಿಹರನ ಮನೋಧರ್ಮ ಹಾಗೂ ಆ ಕಾಲದ ಸಾಹಿತ್ಯಕ ಒಲವುಗಳು ಎರಡರಿಂದಲೂ ಕೊಂಚ ಭಿನ್ನವಾಗುವ ಕೃತಿ. ಆದರೂ ಇದರಲ್ಲಿ ಹರಿಹರನ ಪ್ರತಿಭೆಗೆ ಹಲವು ನಿದರ್ಶನಗಳು ದೊರೆಯುತ್ತವೆ.

 

  1. ಮುಂದಿನ ಓದು:

ಅ. ಹಂಪೆಯ ಹರಿಹರ, 1939, ಡಿ.ಎಲ್. ನರಸಿಂಹಾಚಾರ್, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ಆ. ಹರಿಹರದೇವ, 1932, ಸಂ. ಕೆ.ಜಿ.ಕುಂದಣಗಾರ, ರಾಜಾರಾಮ ಕಾಲೇಜು, ಕೊಲ್ಲಾಪುರ

ಇ. ಹರಿಹರ- ಸಾಂಸ್ಕೃತಿಕ ಮುಖಾಮುಖಿ, ಶಿವಾನಂದ ವಿರಕ್ತಮಠ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಈ. ಶಿವಾನಂದ ವಿರಕ್ತಮಠ ಅವರು ಸಂಪಾದಿಸಿರುವ ಕೃತಿಯಲ್ಲಿರುವ ವಿವರವಾದ ಗ್ರಂಥಸೂಚಿ.

 

  1. ವಿದ್ಯುನ್ಮಾನ ಲಿಂಕುಗಳು:
  2. ಅನುವಾದಗಳು:

ಮುಖಪುಟ / ಸಾಹಿತ್ಯ